ಲಿವಿಂಗ್‍ಸ್ಟನ್, ಡೇವಿಡ್
1813-73. ಪ್ರಸಿದ್ಧ ಬ್ರಿಟಿಷ್ ಪರಿಶೋಧಕ; ಪಾದ್ರಿ. ಪ್ರಪಂಚಕ್ಕೆ ಆಫ್ರಿಕ ಖಂಡದ ಬಗ್ಗೆ ತಿಳಿವಳಿಕೆ ಮೂಡಿಸಿದವ (ಇನ್ನೊಬ್ಬ ಪರಿಶೋಧಕ ಸರ್ ಹೆನ್ರಿ ಮಾರ್ಟನ್ ಸ್ಟಾನ್‍ಲೇ). ಈತ ಸ್ಕಾಟ್ಲೆಂಡಿನ ಲಂಕಾಷೈರ್‍ನಲ್ಲಿರುವ ಬ್ಲಾಂಟೈರ್ ವಕ್ರ್ಸ್ ಎಂಬ ಹಳ್ಳಿಯಲ್ಲಿ 1813 ಮಾರ್ಚ್ 19ರಂದು ಜನಿಸಿದ. ಇವನ ತಂದೆ ನೈಲ್ ಲಿವಿಂಗ್‍ಸ್ಟನ್, ತಾಯಿ ಆಗ್ನೆಸ್ ಹಂಟರ್. ಹತ್ತನೆಯ ವಯಸ್ಸಿಗೇ ಹತ್ತಿ ಗಿರಣಿ ಯೊಂದರಲ್ಲಿ ಕೆಲಸಕ್ಕೆ ಸೇರಿ ಸ್ವಶ್ರಮದಿಂದ ಕಾಲೇಜು ವ್ಯಾಸಂಗಕ್ಕೆ ಅರ್ಹತೆಗಳಿಸಿ ಗ್ಲಾಸ್ಗೊ ಅಂಡರ್‍ಸನ್ ಕಾಲೇಜಿನಲ್ಲಿ ವೈದ್ಯ, ಗ್ರೀಕ್ ಮತ್ತು ಬ್ರಹ್ಮವಿದ್ಯೆ (ಥಿಯಾಸೊಫಿ) ಅಭ್ಯಾಸ ಮಾಡಿದ. 1838ರ ಸೆಪ್ಟೆಂಬರ್ ನಲ್ಲಿ ಲಂಡನ್ ಮಿಷನರಿ ಸೊಸೈಟಿಗೆ ಸೇರಿದ. ಗ್ಲಾಸ್ಗೊ ವಿಶ್ವವಿದ್ಯಾಲಯದಿಂದ 1840ರಲ್ಲಿ ವೈದ್ಯ ಪದವಿ ಗಳಿಸಿದ. ಅದೇ ವರ್ಷ ಲಂಡನ್ ಮಿಷನರಿ ಸೊಸೈಟಿ ಧರ್ಮ ಪ್ರಸಾರ ಕಾರ್ಯಕ್ಕಾಗಿ ಇವನನ್ನು ಆಫ್ರಿಕ ದೇಶಕ್ಕೆ ಕಳುಹಿಸಿಕೊಟ್ಟಿತು.

1840ನೆಯ ಡಿಸೆಂಬರ್ ತಿಂಗಳಿನಲ್ಲಿ ಈತ ಇಂಗ್ಲೆಂಡ್ ಬಿಟ್ಟು 1841ರಲ್ಲಿ ಬೆಚುವಾನ ಲೆಂಡ್‍ಗೆ (ಈಗಿನ ಬಾಟ್ಸ್‍ವಾನ) ಬಂದ. ಸ್ಥಿರನೆಲೆಗಾಗಿ ಉತ್ತರಕ್ಕಿರುವ ದೇಶಗಳಲ್ಲಿ ಎರಡು ವರ್ಷಗಳ ಕಾಲ ಓಡಾಡಿದ. ಕುರುಮಾನ್‍ಗೆ 320 ಕಿಮೀ ದೂರವಿರುವ ಲಿಂಪೊಪೊ ನದಿ ದಡದಲ್ಲಿರುವ ಉಪಮ ಬೋಟ್ಸವನ್ನು ಒಳ್ಳೆಯ ಸ್ಥಳ ವೆಂದು ಆಯ್ಕೆಮಾಡಿಕೊಂಡ. 1846ರ ತನಕ ಅಲ್ಲಿದ್ದು, ಅನೇಕ ಸ್ಥಳಗಳನ್ನು ಶೋಧಿಸಿಕೊಂಡು 1852ರಲ್ಲಿ ಈತ ಕೇಪ್‍ಟೌನ್‍ಗೆ ಬಂದ. ಮಕಲೊಲೊ ರಾಜಧಾನಿಯಾದ ಲಿನ್ಯಾಂಟೆ ಪ್ರದೇಶವನ್ನು 1853ರ ಮೇ ತಿಂಗಳಲ್ಲಿ ಪರಿಶೋಧಿಸಿ ಅಲ್ಲಿಂದ ಲವಂಡಕ್ಕೆ ಬಂದ. ತಾನು ನೋಡಿ ಪರೀಕ್ಷಿಸಿದ ವಿಷಯಗಳನ್ನು ಕೇಪ್‍ಟೌನಿನಲ್ಲಿದ್ದ ಥಾಮಸ್ ಮ್ಯಾಕ್ಲಿಯರ್‍ಗೂ ರಾಯಲ್ ಜಿಯೊಗ್ರಾಫಿಕಲ್ ಸೊಸೈಟಿಗೂ ಕಳುಹಿಸಿಕೊಟ್ಟ. ಪರಿಣಾಮವಾಗಿ 1855ರಲ್ಲಿ ಈ ಸೊಸೈಟಿ ಈತನಿಗೆ ಪದಕ ನೀಡಿ ಸನ್ಮಾನಿಸಿತು. ಅದೇ ವರ್ಷ ಈತ ಡಿಲಾಲೊ ಸರೋವರಕ್ಕೆ ಬಂದು ಅಲ್ಲಿ ಜಲರಾಶಿ ವಿವರಣೆ ಶಾಸ್ತ್ರವನ್ನು (ಹೈಡ್ರೊಗ್ರಫಿ) ಮನದಟ್ಟುಮಾಡಿಕೊಂಡ. ಈತ ನದಿಗಳ ವಿಷಯವಾಗಿ ಮಾಡಿದ ಸಿದ್ಧಾಂತಗಳು ಇಂದಿಗೂ ಸತ್ಯವಾಗಿವೆ. ಅದೇ ವರ್ಷ ಈತ ಜಾಂಬೆಜಿ ನದಿಯ ವಿಕ್ಟೋರಿಯ ಜಲಪಾತವನ್ನು ಪತ್ತೆಮಾಡಿದ. ಪೋರ್ಚುಗೀಸರ ವಸಾಹತುವಾದ ಟೆಟೆಯನ್ನು 1856ರಲ್ಲಿ ಪರೀಕ್ಷಿಸಿದ. ಅಲ್ಲಿಂದ ಕ್ವಿಲಿಮಾನೆಗೆ ಹೋದ. ಭೂಗೋಳ ಮತ್ತು ಪ್ರಕೃತಿ ಶಾಸ್ತ್ರಗಳಲ್ಲಿ ಈತ ಬರೆದಿಟ್ಟ ಸಿದ್ಧಾಂತಗಳು ಇಂದಿಗೂ ನಿಖರವಾಗಿವೆ. ಈತನ ಪರಿಶೋಧನೆಯ ಅನಂತರ ಇಡೀ ಮಧ್ಯ ಆಫ್ರಿಕದ ಭೂಪಟವನ್ನೇ ಬದಲಾಯಿಸಬೇಕಾಯಿತು. 

1856ರಲ್ಲಿ ಈತ ಇಂಗ್ಲೆಂಡಿಗೆ ವಾಪಸಾದ. ಅನಂತರ 1858ರಲ್ಲಿ ಬ್ರಿಟಿಷ್ ಸಲಹೆಗಾರನಾಗಿ ನೇಮಕಗೊಂಡು ಮೊಜಾಂಬಿಕ್‍ನ ಕ್ವಿಲಿಮಾನೆಗೆ ತೆರಳಿದ. 1858ನೆಯ ಮಾರ್ಚಿಯಲ್ಲಿ ಹೊರಟು ಮೇ ತಿಂಗಳಲ್ಲಿ ಜಾಂಬೆಜಿಯನ್ನು ಸೇರಿದ. 1859ರಲ್ಲಿ ಶಿರೆ ನದಿಯನ್ನೂ ನ್ಯಾಸ ಸರೋವರವನ್ನೂ ಪರಿಶೋಧಿಸಿದ. 1864ರಲ್ಲಿ ಸ್ವದೇಶಕ್ಕೆ ಮರಳಿ ಪುನಃ 1866ರಲ್ಲಿ ಆಫ್ರಿಕಕ್ಕೆ ಬಂದ. ಈ ಬಾರಿ ನೈಲ್ ನದಿಯ ಮೂಲ ಶೋಧಿಸ ಹೊರಟು ಲೇಕ್‍ನ್ಯಾಸವನ್ನು ಸುತ್ತಿಕೊಂಡು ಲೇಕ್ ಟ್ಯಾಂಗನ್ಯೀಕ ತಲುಪಿದ. 1867ನೆಯ ಜನವರಿಯಲ್ಲಿ ಜಾಂಬೆಜಿಯನ್ನು ದಾಟಿ ಮಾರ್ಚ್ ತಿಂಗಳಲ್ಲಿ ಟ್ಯಾಂಗನ್ಯೀಕದ ದಕ್ಷಿಣ ತುದಿ ಮುಟ್ಟಿದ. 1868ರ ಜುಲೈನಲ್ಲಿ ಲೇಕ್ ಬಾಂಗ್ವೆಉಲುವನ್ನು ಆವಿಷ್ಕರಿಸಿದ. 1869ನೆಯ ಮಾರ್ಚ್‍ನಲ್ಲಿ ಉಜಿಜಿ ಸೇರಿದ. ಪುನಃ ಟ್ಯಾಂಗನ್ಯೀಕವನ್ನು ದಾಟಿ ಮಾನ್ಯಮ ದೇಶದ ಮೂಲಕ ಹೊರಟು ಅಲ್ಲಿಯ ನಿವಾಸಿಗಳಿಂದಲೂ ಬೇಟೆಗಾರರಿಂದಲೂ ಅನೇಕ ಕಷ್ಟನಷ್ಟ ಅನುಭವಿಸಿ ಅನಾರೋಗ್ಯದಿಂದ ನರಳಿ 1871ನೆಯ ಮಾರ್ಚ್‍ನಲ್ಲಿ ವ್ಯಾಂಗ್ವೇ ಪಟ್ಟಣದ ಹತ್ತಿರವಿದ್ದ ಅಲಾಬವನ್ನು ಸೇರಿದ. ಅಲ್ಲಿ ನಾಲ್ಕು ತಿಂಗಳು ತಂಗಿದ್ದ. ಅಲ್ಲಿ ಅರಬ್ ಗುಲಾಮರು ವಿನಾಕಾರಣ ನಡೆಸಿದ ಮಹಿಳೆಯರ ಕಗ್ಗೊಲೆಯಿಂದ ಈತ ಮನನೊಂದು ಪುನಃ ಉಜಿಜಿಗೆ ಬಂದ. ಮಧ್ಯ  ಆಫ್ರಿಕದೊಳಗೆ ಪ್ರವೇಶಿಸಿದ್ದ ಈತನ ಸುರಕ್ಷಿತತೆಯ ದೃಷ್ಟಿಯಿಂದ  ಸರ್‍ಹೆನ್ರಿ ಮಾರ್ಟಿನ್  ಸ್ಟಾನ್‍ಲೇ ಎಂಬಾತನನ್ನು ಸಹಾಯಕ್ಕೆ ಕಳುಹಿಸಲಾಯಿತು. ಸ್ಟಾನ್‍ಲೇ ಉಜಿಜಿಯಲ್ಲಿ ಇವನನ್ನು ಸಂಧಿಸಿ ಅನೇಕ ವಸ್ತುಗಳನ್ನು ಒದಗಿಸಿದ. ಸ್ಟಾನ್‍ಲೇಯ ಸಹಾಯದಿಂದ ಟ್ಯಾಂಗನ್ಯೀಕದ ಉತ್ತರ ಭಾಗವನ್ನು ಪರಿಶೋಧಿಸಿದ. ಸ್ಟಾನ್‍ಲೇ 1872ರ ಮಾರ್ಚ್ ತನಕ ಇವನೊಡನಿದ್ದು ತೀರಕ್ಕೆ ವಾಪಸಾದ. ಅನಂತರ ಲಿವಿಂಗ್‍ಸ್ಟನ್ ಲೇಕ್ ಬಾಂಗ್ವೆಉಲು ಕಡೆ ತನ್ನ ಪ್ರಯಾಣ ಮುಂದುವರಿಸಿದ.  ಆದರೆ  ಮಾರ್ಗಮಧ್ಯದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ 1873 ಮೇ 1ರಂದು ನಿಧನಹೊಂದಿದ. 

ಈತ ತನ್ನ ಅನುಭವಗಳನ್ನು ಮಿಷನರಿ ಟ್ರಾವಲ್ಸ್ ಅಂಡ್ ರಿಸರ್ಚಸ್ ಇನ್ ಸೌತ್ ಆಫ್ರಿಕ ಎಂಬ ಗ್ರಂಥದಲ್ಲಿ ಹೇಳಿಕೊಂಡಿದ್ದಾನೆ(1856). 1874ರಲ್ಲಿ ಹೊರೇಸ್ ವ್ಯಾಲರ್ ಎಂಬಾತ ಈತನ ಏಳು ವರ್ಷಗಳ ಯಾನದ ಅನುಭವಗಳನ್ನು ಲಾಸ್ಟ್ ಜರ್ನಲ್ಸ್ ಆಫ್ ಡೇವಿಡ್ ಲಿವಿಂಗ್‍ಸ್ಟನ್ ಇನ್ ಸೆಂಟ್ರಲ್ ಆಫ್ರಿಕದಲ್ಲಿ ಪ್ರಕಟಿಸಿದ್ದಾನೆ.
	(ಬಿ.ಎಮ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ